	ಬೆಲೆ ಚಲನೆಗಳು		

ಬಂಡವಾಳವಾದಿ ಅರ್ಥವ್ಯವಸ್ಥೆಯಲ್ಲಿ ಬೆಲೆಗಳು ಅನುಭೋಗ ಮತ್ತು ಉತ್ಪಾದನೆಯ ವಿವಿಧ ಸಂಪನ್ಮೂಲಗಳ ಪರಿಮಾಣವನ್ನು ನಿರ್ಧರಿಸುವ ಮುಖ್ಯ ಸಾಧನಗಳು (ಪ್ರೈಸ್ ಮೂವ್ಮೆಂಟ್ಸ್). ಮುಕ್ತ ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ಪೂರೈಕೆಗಳಲ್ಲಿಯ ಪರಸ್ಪರ ಸಂಘರ್ಷದ ಮೂಲಕ ಬೆಲೆ ನಿರ್ಧರಿಸಲ್ಪಡುವುದು. ಉದ್ಯಮಿಗಳು ಹೆಚ್ಚು ಲಾಭದ ಆಸೆಯಿಂದ ಉತ್ಪಾದನ ಪರಿಮಾಣವನ್ನು ಬೆಲೆಗಳ ಚಲನೆ ಅವಲಂಬಿಸಿ ನಿರ್ಣಯಿಸುವರು. ಸಾಮಾನ್ಯವಾಗಿ ಬೆಲೆಗಳು, ಜನರ ಬೇಡಿಕೆ ಮತ್ತು ಉತ್ಪಾದನ ವೆಚ್ಚವನ್ನವಲಂಬಿಸಿರುತ್ತವೆ. ಬೆಲೆಗಳ ಏರಿಳಿತಗಳು ಬಂಡವಾಳವಾದಿ ವ್ಯವಸ್ಥೆಯ ವೈಶಿಷ್ಟ್ಯ. ವ್ಯಾಪಾರ ಚಕ್ರ ಸಿದ್ಧಾಂತದ ಪ್ರಕಾರ ಬೆಲೆಗಳ ಏರಿಳಿತಗಳು ಆಕಸ್ಮಿಕ ಘಟನೆಗಳಾಗಿರದೆ ಅಲೆಯ ರೀತಿ ಸಂಭವಿಸುವಂಥವು. ಅರ್ಥವ್ಯವಸ್ಥೆಯಲ್ಲಿ ಕೆಲವು ವರ್ಷಗಳಲ್ಲಿ ವ್ಯಾಪಾರದ ಮುಗ್ಗಟ್ಟು ಕಂಡುಬರುತ್ತದೆ. ಈ ಪ್ರವೃತ್ತಿ ಕಡಿಮೆಯಾಗಿ ಪುನಶ್ಚೇತನದ ಬಲಗಳು ವರ್ಧಿಸಿ ಕ್ರಮೇಣ ಬೆಲೆಗಳು ಏರತೊಡಗಿದಂತೆ ಉದ್ಯೋಗ ಹಾಗೂ ಜನರ ವರಮಾನಗಳ ಗಾತ್ರ ಬೆಳೆಯುತ್ತವೆ. ಜನರ ವರಮಾನಗಳಲ್ಲಿ ಏರಿಕೆಯಾದಂತೆ ಅವರ ಖರೀದಿ ಸಾಮಥ್ರ್ಯ ಹೆಚ್ಚಿ ಉದ್ಯಮಗಳ ಸರಕುಗಳಿಗೆ ಬೇಡಿಕೆ ಬೆಳೆದು, ಉತ್ಪಾದನೆಗೆ ಉತ್ತೇಜನ ದೊರೆತು ವ್ಯಾಪಾರ ಉತ್ಕರ್ಷೆಗೊಳ್ಳುತ್ತದೆ. ಇದು ಗರಿಷ್ಠಹಂತ ಮುಟ್ಟುವ ವೇಳೆಗೆ ಅರ್ಥ ವ್ಯವಸ್ಥೆಯಲ್ಲಿ ಅಂತರ್ಗತವಾದ ವೈರುದ್ಧ್ಯಗಳಿಂದ ಮತ್ತೊಮ್ಮೆ ಬೆಲೆಗಳು ಇಳಿಯತೊಡಗುವುವು. ಮತ್ತೊಮ್ಮೆ ಹಣದ ವಿಯೋಜನೆ, ಉತ್ಪಾದನೆ, ಉದ್ಯೋಗ ವರಮಾನಗಳು ತಗ್ಗುವುವು. ಜನರ ಕೊಳ್ಳುವ ಸಾಮಥ್ರ್ಯ ಕುಗ್ಗಿ ಬೆಲೆಗಳು ಕುಸಿದು ಆರ್ಥಿಕ ಮುಗ್ಗಟ್ಟು ತಲೆದೋರುವುದು. ಹೀಗೆ ಚಕ್ರೀಯವಾಗಿ ಹಲವಾರು ವರ್ಷಗಳಿಗೆ ಒಮ್ಮೆಯಂತೆ ಅರ್ಥ ವ್ಯವಸ್ಥೆಯಲ್ಲಿಯ ಬೆಲೆಗಳ ಏರಿಕೆ ಹಾಗೂ ಇಳಿತ 1820 ರಿಂದ 1914ರ ತನಕದ ಅವಧಿಯಲ್ಲಿ ಸಂಭವಿಸುತ್ತಿದ್ದುವು. ಸ್ಥೂಲವಾಗಿ ಬೆಲೆಗಳ ಏರಿಳಿತ ಪ್ರಪಂಚದ ಚಿನ್ನದ ಉತ್ಪಾದನೆ ಹಾಗೂ ಪೂರೈಕೆಯನ್ನು ಅವಲಂಬಿಸಿದ್ದುವು. ಸ್ವರ್ಣ ಪ್ರಮಿತಿಯನ್ನು ಅನುಸರಿಸಿದ್ದ ರಾಷ್ಟ್ರಗಳಲ್ಲಿ ಚಿನ್ನದ ದಾಸ್ತಾನು ಅಧಿಕವಾಗಿ ತತ್ಫಲವಾಗಿ ಹಣದ ಪರಿಮಾಣ ಹೆಚ್ಚಿದಾಗ ಬೆಲೆಗಳು ಏರುತ್ತಿದ್ದುವು. ಅದು ಕಡಿಮೆಯಾದಾಗ ಬೆಲೆಗಳು ಇಳಿಯುತ್ತಿದ್ದುವು. ಇದು ಚಲಾರ್ಥ (ಕರೆನ್ಸಿ) ಹಾಗೂ ನಾಣ್ಯಪದ್ಧತಿ ಅನುಸರಿಸಿದ ರಾಷ್ಟ್ರಗಳು ಪಾಲಿಸಬೇಕಾದ ಮುಖ್ಯ ನಿಯಮ. ಉದರಿ ವ್ಯವಸ್ಥೆ ಒಂದು ದೇಶದ ಹಣ ಪ್ರಾಧಿಕಾರದ ವಶದಲ್ಲಿದ್ದ ಚಿನ್ನದ ಪರಿಮಾಣವನ್ನೇ ಅವಲಂಬಿಸಿದ್ದರಿಂದ ದೀರ್ಘಕಾಲದ ಅಲ್ಲಿಯ ನಾಣ್ಯದ ಕೊಳ್ಳುವ ಸಾಮಥ್ರ್ಯವನ್ನು ಸ್ಥಿರಮಟ್ಟದಲ್ಲಿ ಕಾಪಾಡುವುದು ಸಾಧ್ಯವಾಗಿತ್ತು. ಆದರೆ ಚಿನ್ನದ ಚಲನೆಗೆ ಅಡ್ಡಿ ಒಡ್ಡದಿರುವುದು ಸ್ವರ್ಣ ಪ್ರಮಿತಿಯ ಮುಖ್ಯ ನಿಯಮಗಳಲ್ಲಿ ಒಂದಾಗಿದ್ದುದರಿಂದಲೂ ಇದರಿಂದ ಒಂದು ನಾಣ್ಯದ ಬಾಹ್ಯಮೌಲ್ಯದಲ್ಲಿ ಸ್ಥಿರತೆ ಸಾಧಿಸಿದರೂ ಆಂತರಿಕವಾಗಿ ಉದ್ಯೋಗ, ಉತ್ಪಾದನೆ ಮುಂತಾದವುಗಳ ಮೇಲೆ ಅನಿಷ್ಟ ಪರಿಣಾಮವಾಗುತ್ತಿದ್ದುದರಿಂದಲೂ ಬಿಕ್ಕಟ್ಟಿನ ಕಾಲದಲ್ಲಿ ಒಂದು ದೇಶದ ಚಿನ್ನವೆಲ್ಲ ಹೊರಕ್ಕೆ ಹರಿದುಹೋಗಿ ಸ್ವರ್ಣ ಪ್ರಮಿತಿಯನ್ನು ಉಳಿಸಿಕೊಳ್ಳುವುದೇ ಅಸಾಧ್ಯವಾಗುವ ಸ್ಥಿತಿ ಬಂದುದರಿಂದಲೂ ಈ ಪ್ರಮಿತಿಯನ್ನು ಸರ್ಕಾರಗಳು ತ್ಯಜಿಸಿದುವು. ಒಂದು ನಾಣ್ಯದ ಮೌಲ್ಯ ಅದರ ಆಂತರಿಕ ಲೋಹದ ಅಥವಾ ಅದಕ್ಕೆ ಪ್ರತಿಯಾಗಿ ಸರಕಾರ ಅಥವಾ ಹಣಪ್ರಾಧಿಕಾರ ಕೊಡಲು ಬದ್ಧವಾಗಿದ್ದ ಚಿನ್ನದ ಪರಿಮಾಣಕ್ಕೆ ಅನುಗುಣವಾಗಿ ಸ್ಥಿರವಾಗಿರುವುದು ತಪ್ಪಿಹೋಯಿತು. ಇದನ್ನು ನಿರ್ವಹಿಸುವವರ ಹೊಣೆಗಾರಿಕೆ ವಿಶೇಷವಾಗಿ ಹೆಚ್ಚಿತು. ಕರೆನ್ಸಿಯ ಪೂರೈಕೆಯನ್ನು ಅನುಸರಿಸಿ ಇದರ ಮೌಲ್ಯ ಬದಲಾಗತೊಡಗಿತು. 

	ಬೆಲೆಗಳ ಏರಿಳಿತಗಳಿಗೆ ಹಣದ ಪೂರೈಕೆಯಷ್ಟೇ ಅಲ್ಲದೆ ಸರಕು ಸೇವೆಗಳ ಪೂರೈಕೆ, ಬೇಡಿಕೆ ಇವೂ ಕಾರಣವಾಗುತ್ತವೆ. ಯಾವುದೇ ಒಂದು ವಲಯದಲ್ಲಿ ತಲೆದೋರುವ ವ್ಯತ್ಯಾಸದ ಪರಿಣಾಮವಾದ ಏರಿಳಿತಗಳು ಇತರ ವಲಯಗಳಿಗೂ ವಿಸ್ತರಿಸುವುದು ಸಾಮಾನ್ಯ. ಉದಾಹರಣೆಗೆ ಕೃಷಿ ಉತ್ಪನ್ನ ಅಧಿಕವಾದಾಗ ರೈತರ ವರಮಾನ ಹೆಚ್ಚಿ ಅವರಿಂದ ಇತರ ಸರಕು ಸೇವೆಗಳಿಗೆ ಬೇಡಿಕೆ ಬೆಳೆಯುವುದು. ಕೈಗಾರಿಕೆಗಳಿಗೆ ಅಗತ್ಯವಾದ ಕಚ್ಚಾಸಾಮಗ್ರಿ ಅಧಿಕವಾಗಿ ಪೂರೈಕೆಗೊಂಡು ಅವುಗಳ ಉತ್ಪಾದನೆ ಅಧಿಕವಾಗುವುದು. ಹೀಗೆ ಸಾರ್ವತ್ರಿಕವಾಗಿ ಅಭ್ಯುದಯ ಸಾಧಿಸಬಹುದು. ಇದರಿಂದ ವಹಿವಾಟು ಅಧಿಕವಾಗಿ ಹಣಕ್ಕೆ ಬೇಡಿಕೆ ಹೆಚ್ಚಬಹುದು. ಹಣಕ ಪೂರೈಕೆ ಹೆಚ್ಚಿಸದಿದ್ದರೆ ಇರುವ ಹಣದ ಚಲಾವಣೆಯ ವೆಚ್ಚ ಹೆಚ್ಚಬಹುದು, ಹಣದ ಮೌಲ್ಯ ಅಧಿಕವಾಗಬಹುದು, ಎಂದರೆ ಬೆಲೆಗಳು ಇಳಿಯಬಹುದು. ಸಾಮಗ್ರಿಯ ಉತ್ಪಾದನೆ ಅಧಿಕವಾದಾಗ ಅದನ್ನು ಬಳಸುವ ಕೈಗಾರಿಕೆಗಳ ಉತ್ಪಾದನೆ ಇತರ ಬಗೆಯ ಸಾಮಗ್ರಿಗಳನ್ನು ಬಳಸುವ ಕೈಗಾರಿಕೆಗಳು ಅದಕ್ಕಿಂತ ಅಧಿಕವಾಗಬಹುದು. ಅಂತೂ ಅರ್ಥವ್ಯವಸ್ಥೆಯ ಯಾವುದೇ ವಲಯದಲ್ಲಿಯ ವ್ಯತ್ಯಾಸದಿಂದ ಹೆಚ್ಚು ಕಡಿಮೆ ಪ್ರಮಾಣಗಳಲ್ಲಿ ಇತರ ವಲಯಗಳಲ್ಲಿ ವ್ಯತ್ಯಾಸಗಳುಂಟಾಗಿ ಬೆಲೆಗಳ ಮೇಲೆ ಅಸಮ ಪರಿಣಾಮ ಉಂಟಾಗಬಹುದು. ಒಂದು ದೇಶದ ಅಮದು ರಫ್ತುಗಳಲ್ಲಿ ಸಮತೋಲ ಇಲ್ಲದಾಗ ವಿದೇಶ ಪಾವತಿ ಶಿಲ್ಕು ಅನುಕೂಲಕರ ಅಥವಾ ಪ್ರತಿಕೂಲಕರವಾಗಿದ್ದಾಗ ಆ ದೇಶದ ನಾಣ್ಯದ ವಿನಿಮಯಮೌಲ್ಯ ಹೆಚ್ಚುಕಡಿಮೆಯಾಗಿ ಅದರಿಂದ ಅಂತಿಮವಾಗಿ ಆಂತರಿಕ ಮೌಲ್ಯದ ಮೇಲೂ ಪರಿಣಾಮ ಉಂಟಾಗಬಹುದು. ಹೀಗೆ ಬೆಲೆಗಳ ಚಲನೆಗೆ ಸೂಕ್ಷ್ಮವೂ ಸಂಕೀರ್ಣವೂ ಆದ ಹಲವಾರು ಕಾರಣಗಳಿರುತ್ತವೆ. ಹಲವು ವೇಳೆ ಜನಸಮುದಾಯದ ಮನಃಸ್ಥಿತಿಯೂ ಸರ್ಕಾರದ ಅಸ್ಥಿರತೆಯೂ ರಾಜಕೀಯ ಕ್ಷೋಭೆಯೂ ಬೆಲೆಗಳನ್ನು ತಲ್ಲಣಗೊಳಿಸಬಹುದು. 

	ಬೆಲೆಗಳ ಏರಿಳಿತಗಳಿಗೆ ಕಾರಣಗಳನ್ನು ಕುರಿತಂತೆ ಅನೇಕ ಅರ್ಥಶಾಸ್ತ್ರಜ್ಞರು ತಂತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಮೇಜರ್ ಡಗ್ಲಸ್ ಮತು ಜೆ.ವಿ. ಹಾಬ್ಸನ್ನರ ಪ್ರಕಾರ ಕಡಿಮೆ ಅನುಭೋಗವೇ ಆರ್ಥಿಕ ಮುಗ್ಗಟ್ಟಿನ ಕಾರಣ. ಉದ್ಯಮಿಗಳು ಉತ್ಪಾದನೆಯ ವಿಧಾನಗಳು ಸುಧಾರಿಸಿದಾಗ ಉತ್ಪಾದನೆ ವಿಸ್ತರಣಗೊಂಡು ವೆಚ್ಚ ತಗ್ಗಿ ಬೆಲೆಗಳು ಇಳಿಯುವುವೆಂದು ಷುಂಪೀಟರ್ ಅಭಿಪ್ರಾಯ ಪಟ್ಟಿದ್ದಾನೆ. ಅರ್ವಂಗ್ ಫಿಷರ್ ಮತ್ತು ಕೇಂಬ್ರಿಜ್ ಅರ್ಥಶಾಸ್ತ್ರಜÐರು ಬೆಲೆಗಳಿಗೂ ಹಣದ ಪರಿಮಾಣಕ್ಕೂ ಇರುವ ನಿಕಟಸಂಬಂಧವನ್ನು ಎತ್ತಿ ತೋರಿಸಿದ್ದಾರೆ. ಒಂದು ನಿರ್ದಿಷ್ಟ ಅವಧಿಯಲ್ಲಿ ವ್ಯವಹಾರದ ಗಾತ್ರ ಹಾಗೂ ಹಣದ ಬದಲಾವಣೆಯ ವೇಗ ಸ್ಥಿರವಾಗಿದ್ದು ಹಣದ ಗಾತ್ರವನ್ನು ಹೆಚ್ಚು ಕಡಿಮೆ ಮಾಡಿದಲ್ಲಿ ಬೆಲೆಗಳಲ್ಲಿ ಈ ಬದಲಾವಣೆಗೆ ಅನುಗುಣವಾಗಿ ಏರಿಳಿತಗಳಾಗುತ್ತವೆ ಎನ್ನುತ್ತಾರೆ ಅವರು. ಆದರೆ ಈ ಸಿದ್ಧಾಂತ ದೀರ್ಘಾವಧಿಯ ಬೆಲೆಗಳ ಏರಿಳಿತಗಳಿಗೆ ಹೆಚ್ಚು ಅನ್ವಯಿಸುವುದೇ ಹೊರತು ಅಲ್ಪಾವಧಿಯ ಬೆಲೆಗಳ ಏರಿಳಿತಗಳಿಗಲ್ಲ. ಬೆಲೆಗಳ ಏರಿಕೆಯ ಉದ್ದೇಶದಿಂದ ಈ ಕ್ರಮಕೈಗೊಂಡರೆ ಇದು ಫಲಕಾರಿಯಾಗದಿರಬಹುದು. 1929ರಲ್ಲಿ ಅಮೆರಿಕದಲ್ಲಿ ಆರ್ಥಿಕ ಮುಗ್ಗಟ್ಟನ್ನು ತಡೆಗಟ್ಟಲು ಹಣದ ಪೂರೈಕೆಯನ್ನು ಹೆಚ್ಚಿಸಲಾಯಿತು. ಆದರೆ ಅದಕ್ಕೆ ಅನುಗುಣವಾಗಿ ಬೆಲೆಗಳು ಏರಲಿಲ್ಲ. ಹಣದ ಮೊತ್ತ ಹೆಚ್ಚಿದಾಗ್ಯೂ ಅದರ ಚಲಾವಣೆಯ ವೇಗ ಇಳಿಯಿತು. 1914-18 ಮತ್ತು 1939-45ರ ಯುದ್ಧಕಾಲದಲ್ಲಿ ಬೆಲೆ ಹೆಚ್ಚಳಕ್ಕೆ ಅಧಿಕ ಹಣದ ಚಲಾವಣೆ ಕಾರಣವಾಗಿದ್ದರೂ ಹಣದ ಪರಿಮಾಣಕ್ಕೂ ಬೆಲೆಗಳಿಗೂ ನಿಗದಿಯಾದ ಪ್ರಮಾಣವೇನೂ ಕಂಡುಬರಲಿಲ್ಲ. ಈಗಿನ ಅರ್ಥ ವ್ಯವಸ್ಥೆಯಲ್ಲಿ ಸರ್ಕಾರ ಅಥವಾ ನಾಣ್ಯ ನೋಟುಗಳಿಗಿಂತ ಬ್ಯಾಂಕುಗಳು ನೀಡುವ ಉದರಿಯ ಪ್ರಮಾಣ ಸಾಮಾನ್ಯವಾಗಿ ಆರ್ಥಿಕ ಚಟುವಟಿಕೆ ಹಾಗೂ ಬೆಲೆಗಳ ಮೇಲೆ ತೀವ್ರತರ ಪರಿಣಾಮ ಉಂಟು ಮಾಡುತ್ತದೆ. ಹಾಟ್ರೆ ಹಾಗೂ ಹಯೇಕ್ ಅವರ ಅಭಿಪ್ರಾಯದಂತೆ ಬ್ಯಾಂಕುಗಳ ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲದ ಬಡ್ಡಿ ದರಗಳು ದೇಶದಲ್ಲಿಯ ಆರ್ಥಿಕ ಮುಗ್ಗಟ್ಟು ಮತ್ತು ಸಮೃದ್ಧಿಗಳಿಗೆ ಕಾರಣವಾಗಿದೆ. ಸರ್ಕಾರದ ಹಾಗೂ ಹಣ ಪ್ರಾಧಿಕಾರಗಳ ನೀತಿಗಳಿಂದಲೂ ಬೆಲೆಗಳ ಮೇಲೆ ಪರಿಣಾಮ ಉಂಟಾಗಬಹುದು. ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕುಗಳ ಬೆಲೆಗಳ ಅಸ್ಥಿರತೆಯಿಂದಾಗುವ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಹಲವಾರು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದುಂಟು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಂಪನ್ಮೂಲಗಳ ಕೊರತೆಯಿದ್ದಾಗ ಅಧಿಕ ಬಡ್ಡಿ ದರದಿಂದ ಬೆಲೆಗಳನ್ನು ನಿಯಂತ್ರಿಸಲಾಗುವುದಿಲ್ಲ. ಸಂಪನ್ಮೂಲಗಳ ಉಪಯೋಗ ಹೆಚ್ಚಿದಂತೆ ಜನರಲ್ಲಿ ಉದ್ಯೋಗ ಬೆಳೆದು ಉತ್ಪನ್ನವೂ ಅಧಿಕವಾಗಿ ಆರ್ಥಿಕ ದೃಢತೆ ಸಾಧಿಸಬಹುದು. 

	ಪ್ರಾಚೀನ ಕಾಲದಲ್ಲಿ ಬೆಲೆಗಳ ಏರಿಳಿತಗಳ ಬಗ್ಗೆ ಹೆಚ್ಚಿನ ಮಾಹಿತಿ ನಮಗೆ ಸಿಗುವುದಿಲ್ಲ. ಪ್ರಾಚೀನ ಬ್ಯಾಬಿಲೋನಿಯಾ ನಾಗರಿಕತೆಯಲ್ಲಿ ಧರ್ಮಾಧಿಕಾರಿಗಳಿಂದ ನಿರ್ಧರಿಸಲ್ಪಟ್ಟ ಬೆಲೆಗಳು ಹಾಗೂ ಮುಕ್ತಪೇಟೆಯಲ್ಲಿಯ ಸ್ಪರ್ಧಾತ್ಮಕ ಬೆಲೆಗಳು ಎಂಬ ದ್ವಿವಿಧ ಬೆಲೆಗಳು ಪ್ರಚಲಿತವಾಗಿದ್ದುವು. ಹಮ್ಮುರಾಬಿಯ ಕಾಲದಲ್ಲಿ ಬೆಲೆಗಳ ಏರಿಕೆಯಿಂದ ಅಲ್ಲಿಯ ನಾಣ್ಯದ ಕೊಳ್ಳುವ ಸಾಮಥ್ರ್ಯ ಕಡಿಮೆಯಾಗಿತ್ತು. ಗ್ರೀಸಿನಲ್ಲಿ 7ನೆಯ ಶತಮಾನದಿಂದ ಬೆಲೆಗಳಲ್ಲಿ ಏರಿಕೆ ಕಂಡುಬಂದಿತು. ರೋಮ್ ನಾಗರಿಕತೆಯ ಕಾಲದಲ್ಲಿ ಕ್ರಿಸ್ತಶಕದ ಪ್ರಾರಂಭದಲ್ಲಿ ಬೆಲೆಗಳು ಸ್ಥಿರವಾಗಿದ್ದು ಮುಂದೆ ಅವುಗಳಲ್ಲಿ ಏರಿಕೆ ಉಂಟಾಯಿತು. ಮಧ್ಯಯುಗದಲ್ಲಿ ಬೆಲೆಗಳು ಏರುತ್ತ 17ನೆಯ ಶತಮಾನದ ಮಧ್ಯದಲ್ಲಿ ಬೆಲೆಗಳು ಅತ್ಯುನ್ನತ ಮಟ್ಟ ಮುಟ್ಟಿದುವು. 19ನೆಯ ಶತಮಾನದಲ್ಲಿ ಹಾಗೂ 20ನೆಯ ಶತಮಾನದ ಮೊದಲ ಕೆಲವು ವರ್ಷಗಳಲ್ಲಿ ಬೆಲೆಗಳ ಏರಿಳಿತಗಳು ವಿಶೇಷವಾಗಿ ಪ್ರಪಂಚದ ಚಿನ್ನದ ಉತ್ಪಾದನೆ ಹಾಗೂ ಪೂರೈಕೆಯನ್ನು ಅವಲಂಬಿಸಿದ್ದುವು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಬೆಲೆಗಳ ಹೆಚ್ಚಳಕ್ಕೆ ಅಧಿಕ ಹಣ ಚಲಾವಣೆ ಮತ್ತು ಅಭಾವ ಪರಿಸ್ಥಿತಿ ಕಾರಣ. ಬೆಲೆಗಳ ಏರಿಕೆಯನ್ನು ತಡೆಗಟ್ಟಲು ಸರ್ಕಾರ ಅವಶ್ಯ ಸರಕುಗಳ ಬೆಲೆ ನಿಯಂತ್ರಿಸಿ ಅವುಗಳ ವಿತರಣೆ ಸರಿಯಾಗಿ ಆಗುವಂತೆ ಕ್ರಮ ಕೈಗೊಂಡಿತು. ಯುದ್ಧ ಮುಗಿದಾಗ ವಿವಿಧ ರಾಷ್ಟ್ರಗಳಲ್ಲಿ ಬೆಲೆಗಳು ಯುದ್ಧ ಪೂರ್ವದ ಬೆಲೆಗಳ ಮಟ್ಟಕ್ಕಿಂತ ಹೆಚ್ಚು ಎತ್ತರವಾಗಿದ್ದುವು. ಬೆಲೆಗಳ ವ್ಯತ್ಯಾಸವನ್ನು ಬೆಲೆ ಸೂಚೀ ಸಂಖ್ಯೆಯಿಂದ ಗುರುತಿಸುವ ಪದ್ಧತಿಯಿದೆ. ಯಾವುದೇ ಒಂದು ವಿಭಾಗಕ್ಕೆ ಸಂಬಂಧಿಸಿದಂತೆ ಯಾವುದೊಂದು ಪ್ರಸಾಮಾನ್ಯ ವರ್ಷದಲ್ಲಿ (ಅಥವಾ ಆಧಾರ ವರ್ಷವೆಂದು ಸ್ವೀಕರಿಸಲಾದ ವರ್ಷದಲ್ಲಿ) ವಿವಿಧ ಸರಕು ಸೇವೆಗಳ ಬೆಲೆಗಳನ್ನು ಸಂಗ್ರಹಿಸಿ, ಅವುಗಳ ಮೊತ್ತವನ್ನು 100 ಎಂದಿಟ್ಟುಕೊಂಡು ಮುಂದಿನ ವರ್ಷಗಳಲ್ಲಿ ಅವು ಶೇಕಡಾ ಎಷ್ಟರಂತೆ ವ್ಯತ್ಯಾಸವಾಗಿವೆ ಎಂಬುದನ್ನು ಅಭಿವ್ಯಕ್ತಿಸುವ ವಿಧಾನವಿದು. ಸಗಟು ಬೆಲೆ ಸೂಚಿ ಹೀಗೆ ಬೇರೆ ಬೇರೆ ಕ್ಷೇತ್ರಗಳಿಗೆ ಅನ್ವಯವಾಗುವ ಸೂಚಿಗಳಿವೆ. ದೀರ್ಘಕಾಲದಲ್ಲಿ ಸರಕು ಸೇವೆಗಳ ಸ್ವರೂಪ, ಜೀವನವಿಧಾನ, ರುಚಿಧರ್ಮ ಮುಂತಾದವುಗಳಲ್ಲಿ ಬದಲಾವಣೆಯಾದಂತೆ, ಬೆಲೆಗಳಲ್ಲೂ ತೀವ್ರವಾಗಿ ವ್ಯತ್ಯಾಸಗಳಾಗದಂತೆ, ಆಧಾರ ವರ್ಷವನ್ನೂ ಸೂಚಿಗೆ ಒಳಪಡಿಸಲಾಗುವ ಸರಕು ಸೇವೆಗಳನ್ನೂ ಅವುಗಳ ಪರಸ್ಪರ ಅನುಪಾತವನ್ನೂ ಬದಲಾಯಿಸಬೇಕಾಗುತ್ತದೆ. ಹೀಗಾಗಿ ಅತಿ ದೀರ್ಘಕಾಲದ ಬದಲಾವಣೆಗಳ ಅಳತೆಗೆ ಬೆಲೆ ಸೂಚಿ ಅಷ್ಟು ಉಪಯುಕ್ತವಾಗದು. ಸಾಮಾನ್ಯವಾಗಿ ಒಂದೆರಡು ದಶಕಗಳಿಗೊಮ್ಮೆ ಸೂಚಿಯ ಆಧಾರ ವರ್ಷವನ್ನು ಬದಲಿಸುತ್ತಿರಬೇಕಾಗುವುದು. ದೀರ್ಘಕಾಲದಲ್ಲಿ ಬೆಲೆಗಳು ಕ್ರಮೇಣ ಏರುತ್ತಲೇ ನಡೆದಿರುವುದು ಮುಖ್ಯವಾಗಿ ಗಮನಿಸಬೇಕಾದ ಸಂಗತಿ. ಒಂದನೆಯ ಮಹಾಯುದ್ಧಾನಂತರ ಕಾಲದಲ್ಲಿ 1930ರ ಆಚೀಚಿನ ಕೆಲವು ವರ್ಷಗಳನ್ನು ಬಿಟ್ಟರೆ ಉದ್ದಕ್ಕೂ ಬೆಲೆಗಳು ತೀವ್ರವಾಗಿ ಏರಿರುವುದನ್ನು ಕಾಣಬಹುದು. 1930ರ ಪ್ರಪಂಚದ ಮಹಾ ಮುಗ್ಗಟ್ಟನ್ನು ಸರ್ಕಾರಗಳು ಮರೆಯಲಾರವು. ಮತ್ತೆ ಅಂಥ ಮುಗ್ಗಟ್ಟು ಸಂಭವಿಸದಂತೆ ಅವು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಲೇ ಇವೆ. ಆಗಾಗ ಸಂಭವಿಸುವ ಆರ್ಥಿಕ ಹಿಂಜರಿತಗಳಿಂದಾಗಿ ಬೆಲೆಗಳು ಒಟ್ಟಿನಲ್ಲಿ ಇಳಿಯುವ ಪ್ರವೃತ್ತಿ ತೋರಿಸಿದ್ದರೂ ಅಭಾವ ಪರಿಸ್ಥಿತಿಯಿಂದಲೂ ಹಣದ ಅತಿಪ್ರಸರಣದಿಂದಲೂ ಸರ್ಕಾರಗಳ ಕ್ರಮಗಳಿಂದಲೂ ಎರಡನೆಯ ಮಹಾಯುದ್ಧದ ಅನಂತರ ಕಾಲದಲ್ಲಿ ಬೆಲೆಗಳು ಸಾಮಾನ್ಯವಾಗಿ ಏರುತ್ತಲೇ ಇವೆ. 
(ಎಸ್.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ